ಸಂಪಾದಕರ ಮಾತು

This image has an empty alt attribute; its file name is rsw_365cg_true.webp
ಶ್ರೀ ರಾಧಾಕೃಷ್ಣ ತೊಡಿಕಾನ

“ರೈತರ ಆದಾಯ ದ್ವಿಗುಣ ನೀತಿ ಸ್ಪಷ್ಟಪಡಿಸಲಿ”

ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸರಕಾರಗಳು ಪ್ರಸ್ತಾಪ ಮಾಡುತ್ತಲೇ ಇವೆ. ಅನ್ನದಾತನ ಆರ್ಥಿಕ ಅಭಿವೃದ್ಧಿ ಅತ್ಯಗತ್ಯವಾದದ್ದು. ಆದರೆ ಆದಾಯ ಹೆಚ್ಚಳದ ಪರಿ ಯಾವುದು ಎಂಬುದು ಚಿಂತನ ಚಾವಡಿಯಿಂದ ಸ್ಪಷ್ಟ ನೀತಿ ಹೊರಬಂದಂತಿಲ್ಲ. ಕೃಷಿ ಆರ್ಥಿಕತೆಯ ಪ್ರಮುಖ ಜೀವಾಳ. ದೇಶದಲ್ಲಿ ಶೇಕಡ 87ರಷ್ಟು ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿದ್ದಾರೆ. ಅವರ ಆಹಾರ ಉತ್ಪಾದನೆಯ ಕೊಡುಗೆ ಶೇಕಡ 68% ಎಂದು ಹೇಳಲಾಗುತ್ತಿದೆ. ಈ ಕೃಷಿಕರನ್ನು ದೃಷ್ಟಿಯಲ್ಲಿರಿಸಿಕೊಂಡು ಆದಾಯ ದ್ವಿಗುಣದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಬಿತ್ತಿ ಬೆಳೆದ ಉತ್ಪನ್ನಗಳು ಮಾರುಕಟ್ಟೆಗೆ ಬಂದಾಗ ಬೆಲೆಗಳು ಪಾತಾಳಕ್ಕೆ ಇಳಿಯುತ್ತವೆ. ಬೆಂಬಲ ಬೆಲೆಯ ನಾಟಕ ಶುರುವಾಗುತ್ತದೆ. ಬೆಲೆ ಬರುವವರೆಗೆ ಶೇಖರಣೆ ಮಾಡಿ ಇರಿಸಲು ಬೇಕಾದ ದಾಸ್ತಾನು ವ್ಯವಸ್ಥೆ ಗಳಿರುವುದಿಲ್ಲ. ಕೆಲವೊಂದು ಉತ್ಪನ್ನಗಳು ದೀರ್ಘ ಬಾಳಿಕೆಯ ಗುಣ ಹೊಂದಿರುವುದಿಲ್ಲ. ರೈತರ ಉತ್ಪನ್ನಗಳು ಮಾರುಕಟ್ಟೆಯ ಹರಿವು ನಿಲ್ಲುತ್ತಿದ್ದಂತೆ ಬೆಲೆ ಮೇಲೆದ್ದು ಬಿಡುತ್ತದೆ. ಹಾಗಾದರೆ ರೈತರ ಆದಾಯ ದ್ವಿಗುಣಗೊಳ್ಳುವ ಬಗ್ಗೆ ಹೇಗೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಕೃಷಿ ಉತ್ಪಾದನೆ ಕ್ಷೇತ್ರದಲ್ಲಿ ಸುಧಾರಣೆಯ ಹಲವು ಅವಕಾಶಗಳಿವೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೊಳಿಸುವುದರಿಂದ ಕೃಷಿಕರ ಪಾಲಿಗೆ ಒಂದಿಷ್ಟು ಆದಾಯ ತಂದುಕೊಡುವ ದಾರಿಗಳಿವೆ. ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಹಾಗೂ ಮಾರುಕಟ್ಟೆ ಜಾಲ ನಿರ್ಮಾಣದ ಬಗ್ಗೆ ಸರಕಾರ ತನ್ನ ನಿಲುವು ವ್ಯಕ್ತಪಡಿಸಬೇಕಾಗಿದೆ. ರೈತರ ಕೃಷಿ ಉತ್ಪಾದನೆ ಹೆಚ್ಚಾದಂತೆ ಹಳ್ಳಿಗಳಲ್ಲಿ ಮೌಲ್ಯವರ್ಧನೆ ವೇದಿಕೆಗಳು ಹೆಚ್ಚಾಗಬೇಕು. ಇದರಿಂದ ಕಚ್ಚಾವಸ್ತುಗಳು ಮತ್ತು ಇತರ ಖರ್ಚು-ವೆಚ್ಚಗಳು ಕಡಿತವಾಗಿ ಗ್ರಾಹಕರಿಗೆ ಮೌಲ್ಯವರ್ಧಿತ ಉತ್ಪನ್ನಗಳು ಕಡಿಮೆ ದರದಲ್ಲಿ ದೊರೆಯುವಂತಾಗಬೇಕು. ರಾಜ್ಯದ ಯಾವ ಹಳ್ಳಿಯಲ್ಲಿ ಯಾವ ಬೆಳೆ ಇದೆ ಎಂಬುದನ್ನು ಸಮೀಕ್ಷೆ ಮಾಡಿ ಆಯಾ ಪರಿಸರದಲ್ಲಿ ಸಂಸ್ಕರಣ ಘಟಕಗಳನ್ನು ತೆರೆಯಬೇಕು. ಕೃಷಿಕ ಸಮುದಾಯಕ್ಕೆ ಕೌಶಲ್ಯ ತರಬೇತಿಯನ್ನು ನೀಡಿ ಮೌಲ್ಯವರ್ಧಿತ ಉತ್ಪನ್ನಗಳನ್ನು, ಗುಣಮಟ್ಟದ ಆಧಾರದಲ್ಲಿ ಶ್ರೇಣೀಕರಿಸಿ ಅದಕ್ಕೊಂದು ಬ್ರಾಂಡ್ ರೂಪ ನೀಡಿ ಮಾರುಕಟ್ಟೆ ಕಲ್ಪಿಸಲು ಸರಕಾರ ಎಲ್ಲ ರೀತಿಯ ಸಹಕಾರ ನೀಡಬೇಕಾಗಿದೆ. ಕೇಂದ್ರ ಸರಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಕೃಷಿ ಸಂಬಂಧಿತ ನವೋದ್ಯಮಗಳಿಗೆ ಉತ್ತೇಜನ, ಕೃಷಿ ಸಾಲ ಹೆಚ್ಚಳ ಮೊದಲಾದವುಗಳ ಕುರಿತು ಬಜೆಟಿನಲ್ಲಿ ಪ್ರಸ್ತಾಪಿಸಿದೆ. ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿಯೂ ಅತ್ಯಗತ್ಯವಾದುದು. ರಾಜ್ಯ ಸರಕಾರ ರೈತರ ಆದಾಯ ಹೆಚ್ಚಿಸುವ ಉದ್ದೇಶವಿರಿಸಿ ಸೆಕೆಂಡರಿ ಕೃಷಿ ನಿರ್ದೇಶನಾಲಯ ಆರಂಭಿಸುವುದಕ್ಕೆ ಮುಂದಡಿಯಿಟ್ಟಿದೆ. ಆದರೆ ಅದು ಇಲಾಖಾಧಿಕಾರಿಗಳಿಗೆ ಆಯಕಟ್ಟಿನ ಸ್ಥಳ ಒದಗಿಸುವ ಆಲಯವಾಗವಾಗಬಾರದು. ತನ್ನ ನೈಪುಣ್ಯತೆ ಹಾಗೂ ತಂತ್ರಜ್ಞಾನವನ್ನು ಕೃಷಿಕರಿಗೆ ಧಾರೆಯೆರೆಯುವ ವೇದಿಕೆಯಾಗಬೇಕು. ಹಳ್ಳಿಗಳ ವಾಸ್ತವಿಕತೆ, ಮಾರುಕಟ್ಟೆಯ ಅರಿವು ಅವರಲ್ಲಿರಬೇಕು, ಸೊಪ್ಪು-ತರಕಾರಿ, ಗೆಡ್ಡೆ-ಗೆಣಸು, ಹಣ್ಣು-ಹಂಪಲು, ಬೇಳೆಕಾಳು, ಸಂಬಾರ ಬೆಳೆಗಳು, ಅರಣ್ಯ ಕೃಷಿಯಾಧಾರಿತ ಉತ್ಪನ್ನಗಳು ಯಾವುದೇ ಇರಲಿ ಆಯಾ ಪರಿಸರದ ಉತ್ಪಾದನೆಗೆ ಹಾಗೂ ಕಚ್ಚಾವಸ್ತುಗಳ ಲಭ್ಯತೆಗೆ ಅನುಗುಣವಾಗಿ ಸಣ್ಣ ಸಣ್ಣ ಸಂಸ್ಕರಣ ಘಟಕಗಳು ಹಳ್ಳಿಗಳಲ್ಲೇ ತಲೆ ಎತ್ತಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಇಲಾಖೆಗಳು ಯಾರ ಪ್ರಭಾವಗಳಿಗೆ ಒಳಗಾಗದೆ ಅರ್ಹತೆಯುಳ್ಳ ಎಲ್ಲರಿಗೆ ಸರಕಾರ ನೀಡಬಹುದಾದ ಸವಲತ್ತುಗಳನ್ನು ಒದಗಿಸಬೇಕು. ಹೈನುಗಾರಿಕೆ, ಮೀನುಗಾರಿಕೆ, ಕುರಿ/ಮೇಕೆ, ಹಂದಿ ಸಾಕಾಣಿಕೆ, ಜೇನು ಸಾಕಾಣಿಕೆ, ರೇಷ್ಮೆ ಕೃಷಿ, ಅವುಗಳ ತ್ಯಾಜ್ಯಗಳಿಂದ ಉಪ ಉತ್ಪನ್ನಗಳ ತಯಾರಿ ಸೇರಿದಂತೆ ಕೃಷಿ ಹಾಗೂ ಕೃಷಿಗೆ ಪೂರಕವಾದ ಎಲ್ಲಾ ಸ್ಥರಗಳಿಂದ ಉತ್ಪಾದನೆಸಂಪಾದನೆಗೆ ಒತ್ತು ಮಾಹಿತಿ-ಮಾರ್ಗದರ್ಶನ ನೀಡಿ  ಅನುಷ್ಠಾನದಲ್ಲಿ ಕಾಳಜಿ ಅತ್ಯಗತ್ಯ. ಆಗ ಮಾತ್ರ ಕೃಷಿಕರ ಆದಾಯ ದ್ವಿಗುಣಕ್ಕೊಂದು ಮೌಲ್ಯ ಬಂದೀತು.